।। ಶ್ರೀಮನ್ಮೂಲಸೀತಾರಾಮದಿಗ್ವಿಜಯರಾಮವೇದವ್ಯಾಸಾಂ ವಿಜಯತೇ।।.
ಬ್ರಹ್ಮಾಂತಾ ಗುರವಃ ಸಾಕ್ಷಾದಿಷ್ಟಂ ದೈವಂ ಶ್ರಿಯಃ ಪತಿಃ । ಆಚಾರ್ಯಾಃ ಶ್ರೀಮದಾಚಾರ್ಯಾಃ ಸಂತು ಮೇ ಜನ್ಮಜನ್ಮನಿ.
ಭಾಗವತವು ಭಗವದ್ಭವಾಸುದೇವಕಥಾಸಕ್ತಿಯನ್ನು ಸಾಧನಾಸೋಪಾನವನ್ನು ವಿವರಿಸುವಾಗ, ಮೊದಲ ಮೆಟ್ಟಿಲಾಗಿ ಪ್ರತಿಪಾದಿಸುತ್ತದೆ. ಈ ಕಥಾಸಕ್ತಿಗೆ ಪೂರಕವಾಗಿ ಪುಣ್ಯತೀರ್ಥಸೇವನ ಮತ್ತು ಮಹತ್ಪುರುಷರ ಸೇವೆಗಳನ್ನು ಮಹತ್ವಪೂರ್ಣ ಸಾಧನಗಳೆಂದು ಹೇಳುತ್ತದೆ..
[image] Sri Satyatma Tirtha. ಈ ರೀತಿ ಭಗವಂತನ ಪ್ರಸಾದವನ್ನು ಪಡೆಯಲು ಇಪ್ಪತ್ತು ಸಾಧನ ಮೆಟ್ಟಿಲುಗಳನ್ನು ಭಾಗವತ ವಿವರಿಸುತ್ತದೆ. ಆ ಮೆಟ್ಟಿಲುಗಳನ್ನು ಕ್ರಮೇಣ ಏರಿ, ಭಾಗವತ ಸಾರುವ ಪರಮಧರ್ಮಾಚರಣೆಗೆ ಜೀವಂತ ದೃಷ್ಟಾಂತರಾಗಿರುವವರು ನಮ್ಮ ಇಂದಿನ ಕುಲಗುರುಗಳು ಹಾಗೂ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥರು.
ಅನಾದಿ ಸತ್ಸಂಪ್ರದಾಯ ಪರಂಪರೆಯಿಂದ ಪ್ರಾಪ್ತವಾದ, ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದುತ್ತರಾಧಿಮಠಾಧೀಶರಾದ ಶ್ರೀ ಸತ್ಯಪ್ರಮೋದತೀರ್ಥರ ಕರಕಮಲ ಸಂಜಾತರಾದ ಅಭಿನವ ಶ್ರೀ ಜಯತೀರ್ಥ, ಶ್ರೀ ರಥೋತ್ತಮತೀರ್ಥ, ಶ್ರೀ ಸತ್ಯಧರ್ಮತೀರ್ಥ ಮುಂತಾದ ಮಹಾಭಕ್ತರು ಹೃದಯಪೂರ್ವಕವಾಗಿ ಘೋಷಿಸುವ ಬಿರುದಾಲಂಕೃತರು ಶ್ರೀ 1008 ಶ್ರೀ ಸತ್ಯಾತ್ಮತೀರ್ಥರು ಅವರ 53 ನೇ ಜನೋತ್ಸವ ಹಾಗೂ 30 ನೇ ಪೀಠಾರೋಹಣ ಮಹೋತ್ಸವ.
ಈ ಪುಣ್ಯಸಂದರ್ಭದಲ್ಲಿ ಶ್ರೀ ಸತ್ಯಾಮೃತ ಮಹೋತ್ಸವವನ್ನು 53 ಕ್ಷೇತ್ರಾಧೀಶರು ಹಾಗೂ ಯತಿಗಳ ಶೇಷವಸ್ತ್ರ ಸಮರ್ಪಣೆ, ಪವಿತ್ರ ತೀರ್ಥಜಲದಿಂದ ಅಮೃತಾಭಿಷೇಕದ ಸೇವೆಗಳನ್ನು ನೆರವೇರಿಸಿ, ಕಣ್ಣು ತುಂಬಿ ದರ್ಶನ ಮಾಡಿ, ಕಿವಿಯಿಂದ ಉಪದೇಶಾಮೃತವನ್ನು ಆಲಿಸಿ, ಹೃದಯಪೂರ್ಣ ಭಕ್ತಿಯನ್ನು ಅರ್ಪಿಸಬೇಕೆಂಬುದು ಬೆಳಗಾವಿಯ ಶಿಷ್ಯವೃಂದದ ಆಳವಾದ ಆಶಯ. ಈ ಭಕ್ತಿಭಾವಪೂರ್ಣ ವಿಜ್ಞಾಪನೆಗೆ ಓಗೊಟ್ಟು, 11-02-2026 ರಿಂದ 15-02-2026 ರವರೆಗೆ ಶ್ರೀಗಳು ಬೆಳಗಾವಿಗೆ ದಿಗ್ವಿಜಯ ಯಾತ್ರೆ ನೆರವೇರಿಸಲಿದ್ದಾರೆ..